ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳುವವರನ್ನು ಆಕರ್ಷಿಸುವ ಹತ್ತು ಹಲವು ಸಂಗತಿಗಳಲ್ಲಿ ಧಾರವಾಡ ಪೇಡ ಕೂಡ ಬಹುಮುಖ್ಯವಾದುದು ಎಂದರೆ ಅತಿಶಯದ ಮಾತಾಗಲಾರದು.
ಸುಮಾರು 150 ವರ್ಷಗಳ ಸುದೀರ್ಘ ಇತಿಹಾಸವಿರುವ ಈ "ಪೇಡಾ' ಇತರ ಪೇಡಾಗಳಿಗಿಂತ ಭಿನ್ನವಾಗಿದ್ದು ತನ್ನದೇ ಆದ ವಿಶಿಷ್ಟ ರುಚಿ ಹಾಗೂ ಗುಣಮಟ್ಟದಿಂದ ಹೆಸರುವಾಸಿಯಾಗಿದೆ.
"ಧಾರವಾಡ ಪೇಡಾ'ದ ಮೂಲ ಹೆಸರು "ಠಾಕೂರ ಪೇಡಾ' ಎಂದು. ಸುಮಾರು ಒಂದೂವರೆ ಶತಮಾನದಷ್ಟು ಹಿಂದೆಯೇ ಉತ್ತರ ಭಾರತದ ಲಕ್ನೋದಿಂದ ಧಾರವಾಡಕ್ಕೆ ವಲಸೆಬಂದ ಠಾಕೂರ ಕುಟುಂಬದವರು ತಯಾರಿಸುತ್ತಿದ್ದ ಈ "ಪೇಡಾ' ಕಾಲಕ್ರಮೇಣ "ಧಾರವಾಡ ಪೇಡಾ' ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಜನರಿಂದ ಜನರಿಗೆ ಪ್ರಚಾರಗೊಂಡ ಇದು, ತನ್ನ ಗುಣಮಟ್ಟದಿಂದಾಗಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿ ಪಡೆಯಿತು.
ಸುಮಾರು ನಾಲ್ಕೈದು ತಲೆಮಾರಿನಷ್ಟು ಹಿಂದಿನಿಂದ ಠಾಕೂರ ಕುಟುಂಬ ಅತಿ ಶ್ರದ್ಧೆ ಹಾಗೂ ಸಂಯಮದಿಂದ ಈ ಸಿಹಿತಿಂಡಿಯನ್ನು ತಯಾರಿಸುತ್ತ ಬಂದಿದೆ.
ಯಾವುದೇ ರೀತಿಯ ಕೃತಕ ಬಣ್ಣ ಇಲ್ಲದೇ ರಾಸಾಯನಿಕ ಬಳಸದೇ ಕೇವಲ ಶುದ್ಧ ಹಾಲು ಮತ್ತು ಸಕ್ಕರೆಯ ಹದವಾದ ಮಿಶ್ರಣದಿಂದ ಸ್ವತಃ ಕೈಯಿಂದ ತಯಾರಿಸಲ್ಪಡುವ ಈ ಪೇಡಾ ಸಾಮಾನ್ಯವಾಗಿ ತನ್ನದೇ ಆದ ಸ್ವಾಭಾವಿಕ ಬಣ್ಣದಿಂದ ಕೂಡಿರುತ್ತದೆ.
ಠಾಕೂರ ಕುಟುಂಬದವರು ಇಂದಿಗೂ ಪೇಡಾದ ಮೂಲ ಗುಣಮಟ್ಟವನ್ನು ಕಾಯ್ದುಕೊಂಡು, ಸೀಮಿತ ಪ್ರಮಾಣದಲ್ಲಿ ತಯಾರಿಸುವ ಈ ಪೇಡಾವನ್ನು ಕೊಳ್ಳಲು ಗ್ರಾಹಕರು ಸರತಿಯಲ್ಲಿ ಕಾಯುತ್ತಾರೆ.
ತಲತಲಾಂತರದಿಂದ ಹರಿದುಬಂದ ಈ ವಿಶಿಷ್ಟ ಕಲೆ ಜನಪ್ರಿಯತೆಯ ಜೊತೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಂದುಕೊಟ್ಟಿದೆ.
ಈಗಾಗಲೇ ಈ ಕುಟುಂಬಕ್ಕೆ 1999ರಲ್ಲಿ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ, 2001ರಲ್ಲಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, 1913ರಲ್ಲಿ ಲಾರ್ಡ್ ವಿಲ್ಲಿಂಗ್ಟನ್ ಮೆಡಲ್, 2002ರಲ್ಲಿ ರಾಜೀವಗಾಂಧಿ ಎಕ್ಸಲೆನ್ಸಿ ಪ್ರಶಸ್ತಿ ಮುಂತಾದವು ಲಭ್ಯವಾಗಿವೆ.
0 comments:
Post a Comment