Tuesday 30 April 2013

ಲಾರಿ ಕ್ಲೀನರ್‌ ಮಿಲೇನಿಯರ್‌


ನಿದ್ದೆಯಿಂದ ಎದ್ದು ಇನ್ನೂ ಕಣ್ಣು ಬಿಟ್ಟಿಲ್ಲ. ಆಗಲೇ ಸಾಲಗಾರರ ಸದ್ದು. ಮನೆಯಲ್ಲಿ ಯಾವಾಗಲೂ ಸಾಲದ ಚಿಂತೆ. ಎಲ್ಲಿ ಮನೆ ಹತ್ತಿರ ಬರುತ್ತಾರೋ.. 3 ಎಕರೆ ಜಮೀನು ಇದೆ. ಆದರೆ ಅದನ್ನು ಮಾರಿ ಸಾಲ ತೀರಿಸಿ ಬಿಡೋಣ ಅಂದರೆ ಮುಂದಿನ ಜೀವನಕ್ಕೆ ಏನು ಮಾಡುವುದು?
ಅವಡುಗಚ್ಚಿಕೊಂಡು ಬದುಕುವ ಕರ್ಮ. ಸಾಲ ಸುಮ್ಮನೆ ಅಲ್ಲ. ಬಡ್ಡಿಗೆ ಬಡ್ಡಿ ಏರಿ 4 ಲಕ್ಷ ದಾಟಿತ್ತು. ಅಪ್ಪ ಆಗಾಗ ತೀರಿಸಿದರೂ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದಂಗೆ. ಮನೆಯಲ್ಲಿ 10 ಜನ ಸದಸ್ಯರು. ಹಾಗಂತ ಈ ಸಾಲ ಅಪ್ಪ, ಅಮ್ಮ ಮಾಡಿದ್ದಲ್ಲ. ತಾತ ಮಾಡಿದ್ದು. ತಾತನೂ ಎಲ್ಲರ ತಲೆಯ ಮೇಲೆ ಹೊರೆ ಇರಲಿ ಎಂದು ಮಾಡಿದ ಸಾಲವಲ್ಲ. ಮಕ್ಕಳ ಮದುವೆಗೆ ವಿಧಿಯಿಲ್ಲದೇ ಮಾಡಿದ ಸಾಲ ಇಡೀ ಮನೆಯನ್ನೇ ಆಪೋಷನ ತೆಗೆದುಕೊಳ್ಳುತ್ತಿತ್ತು.
ನಾಲ್ಕು ಜನ ಅಕ್ಕಂದಿರು. ಒಬ್ಬ ತಮ್ಮ. ನಡುವಿನಲ್ಲಿ ನಿಂತ ಹುಸೇನ್‌ ಬಾಷಾ ತಲೆಯಲ್ಲಿ ಯಾವಾಗಲೂ ಸಾಲದ ಚಿಂತೆ. ಒಂದನೇ ಕ್ಲಾಸು, ಎರಡನೇ ಕ್ಲಾಸು ಗಂಗಾವತಿಯ ಚಳ್ಳೂರಿನಲ್ಲಿ ಮುಗಿಸಿದ್ದಾಯಿತು. ಶಾಲೆಗೆ ಹೋದರೂ ಮನೆಯ ಮುಂದೆ ಬಂದು ನಿಲ್ಲುವ ಸಾಲಗಾರರು ಮತ್ತು ಸಾಲ ಸಿಲೆಬಸ್‌ ಆಗಿ ಕಾಡಲು ಶುರು ಮಾಡಿದರು.
ಫೀಸ್‌ ಕಟ್ಟಲು ಹಾಳಾದ್ದು ಬಡತನ ಬಿಡುತ್ತಿರಲಿಲ್ಲ. ಬದುಕನ್ನು ಸಾವರಿಸಿಕೊಂಡು ಹೋಗುವುದು ಅನಿವಾರ್ಯ. ಓದನ್ನು ನಂಬಿ ಹಣ ಮಾಡಲು ಕನಿಷ್ಠ 10-15 ವರ್ಷ ಬೇಕು. ಹಾಗೂ ಹೀಗೂ 8ನೇ ತರಗತಿ ಬಂದು ನಿಂತಾಗ ಮತ್ತೆ ಫೀಸಿನ ಮುಗ್ಗಟ್ಟು. ಆಗ ನೇರ ಹಾರಿದ್ದು ಸಿದ್ಧಗಂಗಾ ಮಠಕ್ಕೆ. ಹೊಟ್ಟೆ ತುಂಬಾ ಊಟ, ತಲೆ ತುಂಬಾ ಜ್ಞಾನ ತುಂಬಿಕೊಂಡದ್ದು ಇಲ್ಲೇ. ಎರಡು ವರ್ಷ ದಾಟಿದಾಗ ಕೈಯಲ್ಲಿ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್‌. ಬಡತನ ಕಾಡುತ್ತಿದ್ದರೂ, ಶೇ.80ರಷ್ಟು ಶ್ರೀಮಂತ ಮಾರ್ಕ್ಸ್.
ಮಠದಲ್ಲಿದ್ದರೂ ಮನೆಯ ಸಾಲದ ನೆನಪು ಸುಳಿಯುತ್ತಲೇ ಇತ್ತು. ಆಗ ಮನಸ್ಸಿಗೆ ಸಾಂತ್ವನ ಹೇಳುತ್ತಿದ್ದದ್ದು ರಾಮಾಯಣ ದರ್ಶನಂ. ಹಾಗೆ ಕಾದಂಬರಿಗಳನ್ನು ಓದುವ ಗೀಳು ಬೆಳೆಯಿತು. ಅದರಲ್ಲಿ ಅವಿತು ಮನಸನ್ನು ನೇವರಿಸಿಕೊಳ್ಳತೊಡಗುವುದು ರೂಢಿಯಾಯಿತು. ಗೊತ್ತಾಗದಂತೆ ಜ್ಞಾನದ ಪರಿಧಿ ವಿಸ್ತರಿಸುತ್ತಾ ಸಾಗಿತು. ಮೊದಲು ಮನೆಯವರ ಕಷ್ಟ. ಆಮೇಲೆ ಓದು, ಕೆಲಸ. ಈಗ ಅವರಿಗೆ ನೆರವಾಗದೇ ಎಲ್ಲ ಸರಿಯಾದಾಗ ಹೆಗಲು ಕೊಟ್ಟರೆ ಪ್ರಯೋಜನೆ ಏನು?
ಲೆಕ್ಕಾಚಾರ ಮಾಡಿಯೇ 10ನೇ ತರಗತಿ ನಂತರ ಶಾಲೆಗೆ ನಮಸ್ಕಾರ ಹೇಳಿ ಕೆಲಸ ಹುಡುಕಲು ಪ್ರಾರಂಭ. ಈ ವಿಷಯ ಹೇಗೋ ಮೆಹಬೂಬ್‌ ಮಾವನ ಕಿವಿಗೆ ಬಿತ್ತು. ಅವರು ಬೆಂಗಳೂರಿನಲ್ಲಿ ಲಾರಿ ಡ್ರೈವರ್‌ ಆಗಿದ್ದವರು. 'ಬಾರೋ ಅನ್ನದ ಮಾರ್ಗ ತೋರಿಸ್ತೀನಿ' ಅಂತ ನೇರವಾಗಿ ಕರೆತಂದು ಬಿಟ್ಟಿದ್ದು ಕಂಠೀರವ ಸ್ಟುಡಿಯೋ ಬಳಿ ಇದ್ದ ಲಕ್ಷಿ$¾à ಬ್ಯಾಟರೀಸ್‌ಗೆ. ಅಲ್ಲಿ ಅಂಗಡಿ ಕೆಲಸ. ತಿಂಗಳಿಗೆ ಒಂದು ಸಾವಿರ ಸಂಬಳ. ಎರಡು ತಿಂಗಳ ಸಂಬಳ ಪಡೆಯುವ ಹೊತ್ತಿಗೆ ಮಾವ ಮರಣ ಹೊಂದಿದರು. ತಲೆಯಲ್ಲಿ ಸಾಲದ ಜೊತೆಗೆ ಇನ್ನೊಂದು ಚಿಂತೆ. ಬೆಂಗಳೂರನ್ನು ಸಂಭಾಳಿಸುವುದು ಹೇಗೆ?
ಬೆಂಗಳೂರೆಂಬ ಮಾಯಾಂಗನೆ ಶ್ರೀಮಂತರಿಗೆ ಎಷ್ಟು ಸ್ಪೇಸು ಕೊಟ್ಟಿರುತ್ತದೋ, ಬಡವರಿಗೂ ಅಷ್ಟೇ ಸ್ಪೇಸು ಕೊಟ್ಟು ಸಲಹುತ್ತದೆ ಎನ್ನುವುದು ನಿಜವಾಯಿತು. ಬೆಳಗ್ಗೆ ಎಲ್ಲಾ ಕೆಲಸ. ರಾತ್ರಿ ಅದೇ ಅಂಗಡಿಯಲ್ಲಿ ಮಲಗುವುದು. ಹೀಗೆ ಎರಡು ವರ್ಷ ತಳ್ಳಿದ್ದಾಯಿತು. ಆದರೂ ಸಾಲ ತೀರಿಸಲು ಆಗಲಿಲ್ಲ. ಮಧ್ಯೆ ಅಕ್ಕನ ಮದುವೆಗೆ ಪುಡಿಗಾಸು ಹೊಂದಿಸಿ ಕೊಟ್ಟದ್ದಷ್ಟೇ ನೆಮ್ಮದಿ, ಹೆಮ್ಮೆ.
ಹೀಗೇ ಇದ್ದರೆ ಆಗದು ಎಂದು ಅಂಗಡಿಯ ಪಕ್ಕದಲ್ಲಿ ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ಇತ್ತು. ಅಲ್ಲಿ ಪಾರ್ಟ್‌ ಟೈಂ ಲಾರಿಗಳಲ್ಲಿ ಮೂಟೆ ಹೊರುವ ಕೆಲಸಕ್ಕೆ ಸೇರಿಕೊಂಡದ್ದಾಯಿತು. ಕೊನೆಗೆ ಅದೇ ಫ‌ುಲ್‌ಟೈಂ ಆಯಿತು. ಆದಾಯದಲ್ಲಿ 500 ರೂ. ಹೆಚ್ಚಾಯಿತು. ಲಾರಿ ಕ್ಲೀನರ್‌ ಆದರೆ ಹೆಚ್ಚಿಗೆ ದುಡ್ಡು ಸಿಗಬಹುದು ಎಂಬುದು ಅರಿವಾಯಿತು. ಗುಲ್ಬರ್ಗ, ರಾಯಚೂರು ಹೀಗೆ ಲಾರಿ ಎಲ್ಲಿ ಹೋಗುತ್ತದೋ ಅಲ್ಲೆಲ್ಲಾ ರೈಟ್‌ ರೈಟ್‌ ಅಂತ ಓಡಾಡುತ್ತಿದ್ದ ಹುಸೇನ್‌. ಲಾರಿಯೇ ಮನೆ. ಜೊತೆಗೆ ಬೇಜಾರು ಕಳೆಯಲು ಒಂದಷ್ಟು ಪುಸ್ತಕಗಳು.
ನಾಲ್ಕು, ಐದು ತಿಂಗಳಿಗೆ ಒಂದು ಬಾರಿ ಊರಿಗೆ ಹೋಗಿ ಅಪ್ಪ, ಅಮ್ಮನನ್ನು ಮಾತನಾಡಿಸಿ, ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ ಹಣ ಕೊಟ್ಟು ಬಂದಾಗ ಒಂದು ರೀತಿ ಸಮಾಧಾನ. ಆದರೂ ಸಾಲ ನೆನಪಿಸಿಕೊಂಡಾಗ ಬೆಟ್ಟದ ಮುಂದೆ ನಿಂತ ಅನುಭವ.
ನಾಲ್ಕು ವರ್ಷ ಕಳೆಯಿತು. ಇದ್ಯಾಕೋ ಆಗದ ಕೆಲಸ ಎಂದು ಊರಿಗೆ ಹೋಗಿ ಮತ್ತೆ ಪಿಯುಸಿಗೆ ಸೇರಿದ್ದಾಯಿತು. ಆದರೆ ಫೀಸ್‌ಗೆ ಏನು ಮಾಡುವುದು? ಯಾವ ಕಾರಣಕ್ಕೂ ಮನೆಯವರನ್ನು ಕೇಳಬಾರದು ಎಂದು ಸ್ವಯಂ ನಿರ್ಬಂಧ ಹೇರಿಕೊಂಡ. ಹಣ ಎಲ್ಲಿ ಸಿಗುತ್ತದೆ? ಮತ್ತದೇ ಕಂಠೀರವ ಸ್ಟುಡಿಯೋ ಹತ್ತಿರದ ಲಾರಿಯ ಕ್ಲೀನರ್‌ ಕೆಲಸ. ಆದರೆ ಈ ಸಲ ಕೇವಲ ಎರಡು ತಿಂಗಳು ಮಾತ್ರ. ಮೈಮುರಿತ ಕೆಲಸದಿಂದ ಫೀಸ್‌ಗೆ ಆಗಿ ಮಿಗುವಷ್ಟು ದುಡ್ಡು ಬಂತು. ಊರಿಗೆ ಹೋಗಿ ಓದಲು ಶುರು ಮಾಡಿದ. ಎರಡನೇ ಪಿಯುಸಿಯಲ್ಲಿ ಶೇ.86ರಷ್ಟು ಅಂಕ ಬಂದಾಗ ಮೂಟೆ ಹೊತ್ತ ಬೆನ್ನು ನೋವೆಲ್ಲಾ ಮಾಯ. ಶ್ರಮಕ್ಕೆ ತಕ್ಕ ಪ್ರತಿಫ‌ಲ ಅಂದರೆ ಇದಲ್ವಾ?ಆದರೆ ಸಾಲ? ಇದನ್ನು ತೀರಿಸಲಿಕ್ಕೆ ಯಾವ ಓದೂ ನೆರವಿಗೆ ಬರಲಿಲ್ಲ.
ಹೀಗೆ ವರ್ಷದಲ್ಲಿ ನಾಲ್ಕು ತಿಂಗಳು ಮೂಟೆ ಹೊರುವುದು, ಹಣ ಸಂಪಾದಿಸುವುದು. ಅದನ್ನು ತಂದು ಫೀಸ್‌ ತುಂಬಿ ಓದುವುದು. ಹೀಗೆ ಮಾಡಿ ಡಿಗ್ರಿಯಲ್ಲಿ ಮೊದಲ ವರ್ಷಕ್ಕೆ ಕಾಲಿಟ್ಟದ್ದಾಯಿತು. ಕಳೆದ ಡಿಸೆಂಬರ್‌ನಲ್ಲಿ ಮತ್ತೆ ಫೀಸಿಗಾಗಿ ದುಡಿಯಲು ಬೆಂಗಳೂರಿಗೆ ಬಂದಾಗ ಅದೃಷ್ಟದ ಬಾಗಿಲು ತೆರೆದಿತ್ತು. ಅಚಾನಕ್ಕಾಗಿ ಪೇಪರ್‌ನಲ್ಲಿ 'ಈ ಪ್ರಶ್ನೆಗಳಿಗೆ ಉತ್ತರಿಸಿದರೆ ಕೋಟ್ಯಾಧಿಪತಿಗಳಾಗಬಹುದು' ಎಂಬ ಜಾಹೀರಾತು ಕಣ್ಣಿಗೆ ಬೀಳುತ್ತದೆ.
ಕೇವಲ 10 ಪ್ರಶ್ನೆ ಉತ್ತರಿಸಿದರೆ ಸಾಕು ನಾಲ್ಕು ಲಕ್ಷ ಚಿಲ್ಲರೆ ದುಡ್ಡು. ನನಗೆ ಬೇಕಾಗಿರುವುದು ಇಷ್ಟೇ. ಇದೊಂದೇ ಮಾರ್ಗದಲ್ಲಿ ತಕ್ಷಣ ಹಣ ಸಿಗುವುದು. ಮನಸ್ಸು ಲೆಕ್ಕಾಚಾರ ಹಾಕಿ ಕಣ್ಣ ಮುಂದೆ ಕನಸು ನೆಟ್ಟಿತು. ಇದೇ ಗುರಿ ಎಂದಿತು.
ನೋಡಿದರೆ 5 ಪ್ರಶ್ನೆಗಳಿಗೆ ಉತ್ತರ ಸರಾಗವಾಗಿ ನಾಲಿಗೆ ತುದಿಯಲ್ಲಿದೆ. ಒಂದು ಕೈ ನೋಡೋಣ ಅಂತ ಹೆಗಲ ಮೇಲಿದ್ದ ಮೂಟೆಯ ಧೂಳನ್ನು ಒದರಿ, ಲಾರಿಯ ಪಕ್ಕದಲ್ಲಿ ನಿಂತು ಮೆಲ್ಲಗೆ ಎಸ್ಸೆಮ್ಮೆಸ್ಸು ಮಾಡಿ ಮರೆತುಹೋದ ಹುಸೇನ್‌.
ಒಂದು ತಿಂಗಳ ನಂತರ 'ನಿಮ್ಮ ಉತ್ತರ ಸರಿಯಾಗಿದೆ. ಹುಬ್ಬಳ್ಳಿಗೆ ಸಂದರ್ಶನಕ್ಕೆ ಬನ್ನಿ' ಎಂಬ ಕರೆ ಬಂತು. ಹಾಗೂ ಹೀಗೂ ದುಡ್ಡು ಹೊಂದಿಸಿ ಸಂದರ್ಶನಕ್ಕೆ ಹೋದರೆ ಅಜಮಾಸು 400 ಜನ ಬಂದಿದ್ದಾರೆ. ಅವರನ್ನು ನೋಡಿ ಇನ್ನು ಚಾನ್ಸು ಸಿಕ್ಕಂತೆಯೇ, ಸಾಲ ತೀರಿದಂತೆಯೇ ಎಂದು ಕಣ್ಣ ಮುಂದೆ ಗುರಿ ಮೊಗಚಿಕೊಂಡಂತಾಯಿತು. ಆದರೂ ಒಂದು ಕೈ ನೋಡೋಣ ಅಂತ ಸಂದರ್ಶನ ಲೀಲಾಜಾಲವಾಗಿ ಎದುರಿಸಿ ಊರಿಗೆ ವಾಪಸ್ಸಾದ. ಎರಡು ತಿಂಗಳಲ್ಲಿ ನೀವು ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದೀರಾ, ಚೆನ್ನೈಗೆ ಬನ್ನಿ ಎಂಬ ಕರೆ ಬಂತು.
ಆಗಲೂ ಕಣ್ಣ ಮುಂದೆ ಇದ್ದ ಗುರಿ ಒಂದೇ. ಹೇಗಾದರೂ ಮಾಡಿ ನಾಲ್ಕು ಲಕ್ಷ ಸಾಲ ತೀರಿಸಿ ಮನೆಯವರಿಗೆ ನೆರವಾಗಬೇಕು ಅನ್ನೋದಷ್ಟೇ. 'ಪುನೀತ್‌ ರಾಜ್‌ಕುಮಾರ್‌ ಎದುರಿಗೆ ಕುಳಿತಾಗ ಇದು ಕನಸು ಎಂದೆನಿಸಿತು. ಒಂದು ರೀತಿ ಒತ್ತಡ. 10 ಪ್ರಶ್ನೆ ಉತ್ತರಿಸಿ ನಾಲ್ಕು ಲಕ್ಷ ಗೆಲ್ಲಬೇಕು. 10 ಪ್ರಶ್ನೆ ತನಕ ಒತ್ತಡದಲ್ಲಿದ್ದೆ. ಆಮೇಲೆ ಫ‌ುಲ್‌ ರಿಲೀಫ್ ಆದೆ' ಎನ್ನುತ್ತಾರೆ ಹುಸೇನ್‌ ಬಾಷಾ. 10 ಪ್ರಶ್ನೆ ನಂತರ ಜೋಳಿಗೆಗೆ 4 ಲಕ್ಷ ಬಿದ್ದಿತ್ತು. ಇನ್ನೇನು? ಒಂಥರಾ ರಿಲೀಫ್. ಮುಂದಿನ ಒಂದೊಂದೇ ಪ್ರಶ್ನೆಗೆ ಉತ್ತರ ಲೀಲಾಜಾಲವಾಗಿ ಕೊಡುತ್ತಾ ಹೋದರು. ಕೊನೆಗೆ ಕೈಗೆ ಬಂದದ್ದು 1 ಕೋಟಿ.
'ಇತಿಹಾಸ ಗೊತ್ತಿಲ್ಲದೆ ಇತಿಹಾಸ ನಿರ್ಮಿಸಲಿಕ್ಕೆ ಆಗೋಲ್ಲ. ನನ್ನ ಜೀವನದಲ್ಲಿ ಕಲಿತ ಪಾಠ ಒಂದು ಕೋಟಿ ಕೊಟ್ಟಿದ್ದು' ಎಂದು ವಿನೀತನಾಗಿ ಬಾಷಾ ಪುನೀತ್‌ ಎದುರು ಹೇಳಿದಾಗ ಸಭಿಕರು ಎದ್ದು ನಿಂತು ಅಭಿನಂದಿಸಿದರು. ಭಾಷಾ ಕಣ್ಣಂಚು ಒದ್ದೆಯಾಯಿತು. ಒಂದು ನಿಮಿಷ ಕಣ್ಣು ಮುಚ್ಚಿ ಕೂತರು. ಮೂಟೆ ಹೊತ್ತಿದ್ದು, ಪೈಸೆ ಪೈಸೆ ಕೂಡಿ ಹಾಕಿದ್ದು, ಸಾಲಗಾರರ ಮನೆ ಮುಂದೆ ನಿಂತದ್ದು ಎಲ್ಲವೂ ಸಿನಿಮಾ ಟ್ರೇಲರ್‌ನಂತೆ ಸರಿದು ಹೋಯಿತು.
ಇದು ಕನಸೇ ಎಂದು ಕೈಯನ್ನು ಚಿವುಟಿಕೊಂಡರು. ಎದುರಿಗಿದ್ದ ಪುನೀತ್‌ 'ಇದು ವಾಸ್ತವವೇ ಮಾರಾಯ, ಕನಸಲ್ಲ' ಅಂತ ಚಿವುಟಿ ತೋರಿಸಿದರು. ಬಾಷಾ ಅಮ್ಮನ ಕಡೆ ನೋಡಿದರು. ಅವರು ಮಾತಾಡಲಿಲ್ಲ. ಕಣ್ಣೀರು ಮಾತನಾಡಿತು. 

0 comments:

Post a Comment

LIKE US

Powered by Blogger.